ನಗರದಲ್ಲಿ ಪ್ರಸ್ತಾಪಗೊಂಡಿರುವ ಹಲವು ಎಲಿವೇಟೆಡ್ ಕಾರಿಡಾರ್ ಹಾಗೂ ಫ್ಲೈಓವರ್ ಯೋಜನೆಗಳ ಕುರಿತು ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಮತ್ತು ಯೋಜನೆಗಳ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್‌ಗಳನ್ನು (DPR) ತಕ್ಷಣವೇ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ತಾಂತ್ರಿಕ ನಿರ್ದೇಶಕ ಬಿ ಎಸ್ ಪ್ರಲ್ಹಾದ್ ಅವರಿಗೆ ಪತ್ರ ಬರೆದಿರುವ ಅವರು, ನಗರದಲ್ಲಿ ಇತ್ತೀಚೆಗೆ ಟೆಂಡರ್ ಕರೆಯಲಾಗಿರುವ ಕೆಲವು ಶಾರ್ಟ್ ಹಾಗೂ ಮೀಡಿಯಂ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗಳಲ್ಲಿನ ಕೆಲವು ಸಂಪೂರ್ಣವಾಗಿ ಅಥವಾ ಭಾಗಶಃ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಸ್ತಾಪಿತ ಯೋಜನೆಗಳಲ್ಲಿ ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ, ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್‌ನಿಂದ ಟೌನ್‌ಹಾಲ್‌ಗೆ ಸಂಪರ್ಕ ಕಲ್ಪಿಸುವ ಲೂಪ್ ಫ್ಲೈಓವರ್ ಯೋಜನೆ ಸೇರಿದೆ. ಇದಲ್ಲದೆ, ಹಳೆ ಮದ್ರಾಸ್ ರಸ್ತೆಯಿಂದ ಇಂದಿರಾನಗರ, ಓಲ್ಡ್ ಏರ್‌ಪೋರ್ಟ್ ರಸ್ತೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಎಲೆಕ್ಟ್ರಾನಿಕ್ ಸಿಟಿವರೆಗೆ 5.2 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಯೋಜನೆಗೆ ಸುಮಾರು ₹852 ಕೋಟಿ ವೆಚ್ಚ ಅಂದಾಜಿಸಲಾಗಿದೆ.


