ಉಡುಪಿ: ಚಳವಳಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ‘ಕಾಕ್ರೋಚ್’ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದರು.
‘ಕಾಕ್ರೋಚ್’ ಹಾಗೂ ಕಾಂಗ್ರೆಸ್ ಬೆಂಬಲಿತರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಗೂಂಡಾ ಸಂಸ್ಕೃತಿ ಮತ್ತು ದೇಶವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಟ್ಕಾ ಸ್ಟ್ಯಾಂಡ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ದೇಶವನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಯಾವುದೇ ಸರ್ಕಾರ ಸಮರ್ಥಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಇಂತಹ ಘಟನೆಗಳನ್ನು ನೆಪವಾಗಿಸಿಕೊಂಡು ದೇಶದ ವಿರುದ್ಧ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ ಭಾರತ ದೇಶದ ಪ್ರತಿಷ್ಠೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ಆದರೆ, ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಕಾಂಗ್ರೆಸ್‌ಗೆ ಚುನಾವಣಾ ವ್ಯವಸ್ಥೆ, ಸಂಸತ್ತು ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದರು.ಸಮಾಜವಿರೋಧಿ ಹಾಗೂ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾದಾಗ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಸರ್ಜಿಕಲ್ ಸ್ಟ್ರೈಕ್ ಮತ್ತು ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿಯೂ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಪ್ರಶ್ನಿಸಲಾಗಿತ್ತು. ಇದೇ ರೀತಿಯ ಮನೋಭಾವದವರು ಈಗ ‘ಕಾಕ್ರೋಚ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಚಳವಳಿಯ ಹೆಸರಿನಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವುದನ್ನು ಭಾರತೀಯ ಸಮಾಜ ಒಪ್ಪುವುದಿಲ್ಲ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಭಾಷೆ ಬಳಸಲಾಗಿದೆ ಎಂದು ಆರೋಪಿಸಿದ ಅವರು, ಇಂತಹ ಪ್ರತಿಭಟನೆಗಳ ಉದ್ದೇಶವೇ ದೇಶದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ ಎಂದು ಹೇಳಿದರು.ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ರಾಹುಲ್ ಗಾಂಧಿ ಡ್ರಗ್ ವ್ಯಸನಿ. ನಶೆಯಲ್ಲಿ ತೇಲಾಡುವ ರಾಹುಲ್ ಗಾಂಧಿ ವಿದ್ಯಾರ್ಥಿಗಳ ತಲೆಗೆ ವಿಷಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್, ಕಾಕ್ರೋಚ್, ಎಸ್‌ಡಿಪಿಐ ಸಹಿತ ರಾಷ್ಟ್ರ ವಿರೋಧಿ ಪಕ್ಷಗಳ ಬೆಂಬಲದಿಂದ ಈ ಹೋರಾಟ ನಡೆದಿದೆ. ಇದು ವಿದ್ಯಾರ್ಥಿಗಳ ಪರ ಕಾಳಜಿಯ ಹೋರಾಟವಲ್ಲ. ವಿದೇಶಿ ಫಡ್ಡಿಂಗ್ ಬಳಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗಿದೆ ಎಂದರು. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಶೇ. 95 ರಷ್ಟು ಮಂದಿ ವಿದ್ಯಾರ್ಥಿಗಳಲ್ಲ. ಟೆರಿಸ್ಟ್ ಸಂಘಟನೆಯಿಂದ ಬಂದಿದ್ದು, ಮುಂದಿನ 100 ದಿನಗಳೊಳಗೆ ಈ ದ್ರೋಹಿಗಳ ಬಣ್ಣ ಬಯಲಾಗಲಿದೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳು ಯಾರು, ದೇಶದ್ರೋಹಿಗಳು ಯಾರು ಎನ್ನುವುದನ್ನು ಸಾಕ್ಷಿ ಸಮೇತ ಜನರ ಮುಂದಿಡುತ್ತಾರೆ ಎಂದರು.ನಶೆಯಲ್ಲಿರುವ ರಾಹುಲ್‌ಗೆ ದೇಶದ ಆಗುಹೋಗುಗಳ ಬಗ್ಗೆ ಚಿಂತೆ ಇಲ್ಲ. ಹಿಂದೂಗಳ ಭಾವನೆ ಕೆರಳಿಸಿ, 1992 ಬಾಬ್ರಿ ಮಸೀದಿ ಧ್ವಂಸ ಮಾಡಿದ ರೀತಿಯಲ್ಲಿ ಹಿಂದೂಗಳ ಭಾವನೆಯನ್ನು ಕೆರಳಿಸುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಂಶವನ್ನು ಕಿತ್ತು ಹಾಕುತ್ತೇವೆ ಎಂದರು.ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿರುವ ಮಣಿಪಾಲದಲ್ಲಿ ಕೇರಳ, ತಮಿಳುನಾಡು ಸಹಿತ 7 ಮಂದಿ ಫ್ಯಾಕಲ್ಟಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ. ಈ 7 ಮಂದಿ ಇಲ್ಲಿನ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ. ಇದನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದ್ದಲ್ಲಿ ನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದರು ಎಚ್ಚರಿಸಿದರು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್ ಅಲೆವೂರು, ದಿನಕರ್ ಬಾಬು, ಸುರೇಶ್ ನಾಯಕ್ ಕುಯಿಲಾಡಿ, ಲಾಲಾಜಿ ಆರ್. ಮೆಂಡನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ಯಾಮಲ್ ಎಸ್. ಕುಂದರ್ ಉಪಸ್ಥಿತರಿದ್ದರು.


