ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಮೀಟ್ : ನಿಟ್ಟೆಗೆ ಸಮಗ್ರ ಪ್ರಶಸ್ತಿ

ಉಡುಪಿ : ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಟ್ರ್ಯಾಕ್ ಅಂಡ್ ಫೀಲ್ಡ್ ಕ್ಲಬ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2026 ರವಿವಾರ ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು. ಸಮಗ್ರ ಪ್ರಶಸ್ತಿಯನ್ನು ನಿಟ್ಟೆ ಎಜ್ಯುಕೇಶನಲ್ ಟ್ರಸ್ಟ್ ಪಡೆದುಕೊಂಡರೆ, ರನ್ನರ್ಸ್‌ ಪ್ರಶಸ್ತಿಯನ್ನು ಉಡುಪಿ ಯುವಜನ ಕ್ರೀಡಾ ಇಲಾಖೆಯ ವಸತಿ ಶಾಲೆ ಪಡೆದುಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಮುಖ್ಯ ಅತಿಥಿಯಾಗಿ ಅಪರ ಜಿಲ್ಲಾಧಿಕಾರಿ ಹಬೀದ್ ಗದ್ಯಾಳ್ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎ.ರಾಜು ವೇಲು, ಆಭರಣ ಜ್ಯುವೆಲ್ಲರ್ಸ್‌ನ ನಿರ್ದೇಶಕ ಸಾತ್ವಿಕ್ ಕಾಮತ್, ಉಡುಪಿ ರನ್ನರ್ಸ್‌ ಕ್ಲಬ್‌ನ ಉಪಾಧ್ಯಕ್ಷ ದಿವಾಕರ್ ಗಣಪತಿ ನಾಯಕ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕ್ರೀಡಾಕೂಟ ಉದ್ಘಾಟನೆ, ಅಥ್ಲೇಟಿಕ್ ಮೀಟ್‌ನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಿದ್ದರು. ಆಭರಣ ಜ್ಯುವೆಲ್ಲರ್ಸ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್ ಕಾಮತ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎ.ರಾಜು ವೇಲು, ಉಡುಪಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಪ್ರಬಂಧಕ ಲಿಜಾಯ್ ಎಸ್., ಎಲ್‌ಐಸಿ ಹಿರಿಯ ವಿಭಾಗೀಯ ಪ್ರಬಂಧಕ ಗಣಪತಿ ಎನ್.ಭಟ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್ ಉಪಾ ಧ್ಯಕ್ಷ ಮಹೇಶ್ ಠಾಕೂರು, ವಕೀಲ ಮಿತ್ರಾ ಕುಮಾರ್ ಶೆಟ್ಟಿ, ಉಡುಪಿ ರನ್ನರ್ಸ್‌ ಕ್ಲಬ್‌ನ ಉಪಾಧ್ಯಕ್ಷ ದಿವಾಕರ್ ಗಣಪತಿ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ನಿಟ್ಟೆ ವಿವಿಯ ನಿರ್ದೇಶಕರಾಗಿ ಆಯ್ಕೆಯಾದ ದೈಹಿಕ ನಿರ್ದೇಶಕ ಗಣೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಕೋಶಾಧಿನಕಾರಿ ಡಾ.ನಾರಾಯಣ ಪ್ರಭು, ಉಡುಪಿ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ಲಬ್‌ನ ಜಾಹೀರ್ ಅಬ್ಬಾಸ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಕಾರ್ಯದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿದರು. ವರದರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 14 ವರ್ಷದೊಳಗಿನ, 16 ವರ್ಷದೊಳಗಿನ, 18 ವರ್ಷದೊಳಗಿನ ಹಾಗೂ 20 ವರ್ಷದೊಳಗಿನ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Related Articles