ಮುದರಂಗಡಿ ; ಡೇವಿಡ್ ಕೊಲೆ ಆರೋಪಿ ಕಾಲಿಗೆ ಗುಂಡೇಟು…!?

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮುದುರಂಗಡಿ ಪೇಟೆಯಲ್ಲಿ ಹಾಡಹಗಲೇ 9ಎಮ್ಎಮ್ ಪಿಸ್ತೂಲಿನಿಂದ ಮಾಜಿ ರೌಡಿ ಶೀಟರ್‌ ಡೇವಿಡ್‌ನನ್ನು ಕೊಲೆಗೈದ ಆರೋಪಿಗಳನ್ನು ಘಟನೆ ನಡೆದ ಏಳೇ ಗಂಟೆಯೊಳಗೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕಾಪು ಪಿಎಸ್ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಹಾಗು ಬೈಂದೂರು ಪಿಎಸ್ಐ ಮಹೇಶ್ ಅವರ ತಂಡವು ಬಂಧಿಸಿ ಕರೆತರುತ್ತಿರುವಾಗ ಬೈಂದೂರು ಸಮೀಪ ಪೋಲಿಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾಪು ಪಿಎಸ್ಐ ತೇಜಸ್ವಿಯವರು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಶೂಟರ್ ರಾಜು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆ.7 ರಂದು ಮಧ್ಯಾಹ್ನ ಸುಮಾರು 3.45 ರ ವೇಳೆಗೆ ಮುದುರಂಗಡಿಯಲ್ಲಿನ ತನ್ನ ಕಚೇರಿಯಿಂದ ತೆರಳಲು ಕಾರು ಹತ್ತುತ್ತಿದ್ದ ಡೇವಿಡ್‌ನನ್ನು ಹಿಂದಿನಿಂದ ಬಂದ ಆಗಂತುಕ 9ಎಮ್‌ಎಮ್ ಪಿಸ್ತೂಲಿನಿಂದ ತಲೆಗೆ ಹಾಗು ಎದೆಗೆ ಗುಂಡು ಹಾರಿಸಿ ಬೈಕ್‌ನಲ್ಲಿ ಇಬ್ಬರು ಪರಾರಿಯಾಗಿದ್ದರು. ಸ್ಥಳದಲ್ಲಿ ದೊರೆತ ಸಿಸಿಟಿವಿಯನ್ನು ಆಧರಿಸಿ ಖಾಕಿ ಪಡೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಕಬಂಧಿ ಹಾಕಿ ತಪಾಸಣೆ ನಡೆಸುತ್ತಿದ್ದ ಪೋಲಿಸರಿಗೆ ಬಸ್‌ನಲ್ಲಿ ಮುಖವನ್ನು ಶಾಲ್‌ನ ಮೂಲಕ ಮುಚ್ಚಿಕೊಂಡಿದ್ದ ವ್ಯಕ್ತಿ ಕಂಡಿದ್ದಾರೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ, ಆತನ ಮೊಬೈಲ್‌ನಲ್ಲಿ ಹತ್ಯೆಯಾದ ಡೇವಿಡ್‌ನ ಪೋಟೊ ಪತ್ತೆಯಾಗಿದೆ‌. ಜೊತೆಗೆ ಆತನ ಖಾತೆಗೆ ₹ 50 ಸಾವಿರ ಜಮೆಯಾಗಿದೆ ಎಂದು ಹೇಳಲಾಗಿದೆ. ಮತ್ತೋರ್ವ ಆರೋಪಿ ಭಟ್ಕಳದಲ್ಲಿ ಪತ್ತೆಯಾಗಿದ್ದು ಆತನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಉತ್ತರ ಪ್ರದೇಶ ಮೂಲದವರು ಎಂದು ಮೂಲಗಳು ತಿಳಿಸಿವೆ. ಕೃತ್ಯ ನಡೆದ ಸ್ಥಳದ ಸಿಸಿಟಿವಿಯನ್ನು ಗಮನಿಸಿದಾಗ ಇಬ್ಬರು ನೇರವಾಗಿ ಕಂಡುಬಂದರೂ, ಪೋಲಿಸರು ಅಧಿಕಾರಿಗಳಿಗೆ ಮೂರನೇ ಆರೋಪಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆ ಇದೆ. ಹೀಗಾಗಿ ಮೂರನೇ ಆರೋಪಿಯೂ ಇದ್ದಾನೆ ಎಂಬ ಬಗ್ಗೆ ಬಲವಾದ ಶಂಕೆಯನ್ನು ವ್ಯಕ್ತಪಡಿಸಿ, ಆ ಬಗ್ಗೆಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮವಲಯ ಐಜಿಪಿ ಅಮಿತ್ ಸಿಂಗ್ ಅವರ ಭೇಟಿಯ ನಂತರ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಹಾಗು ಹಿರಿಯ ಅಧಿಕಾರಿಗಳು ಕುಂದಾಪುರ ಭಾಗದಲ್ಲಿ ಬೀಡು ಬಿಟ್ಟಿದ್ದಾರೆ.

Related Articles