ಮಂಗಳೂರು: ತುಳು ನಾಟಕ ಹಾಗೂ ಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಷಯ ತೀವ್ರ ಚರ್ಚೆ ಹಾಗೂ ಪರ-ವಿರೋಧದ ಅಭಿಪ್ರಾಯಗಳಿಗೆ ಕಾರಣವಾಗಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅರವಿಂದ್ ಬೋಳಾರ್, ‘ನನ್ನ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಮರ ಪಾತ್ರಗಳನ್ನು ಮಾಡಿಸಿದ್ದಾರೆ. ನನಗೆ ಮುಸ್ಲಿಮರೇ ಮೊದಲು. ನನ್ನನ್ನು ಹೆಚ್ಚು ಇಷ್ಟಪಟ್ಟಿದ್ದೇ ಮುಸ್ಲಿಮರು. ನಾನು ಯಾವುದೇ ವೇದಿಕೆಯಲ್ಲಿ ಕೇಳಿದರೂ ಅದನ್ನೇ ಹೇಳುತ್ತೇನೆ’ ಎಂದು ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಬೋಳಾರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ’ಒಬ್ಬ ಕಲಾವಿದ ಬೆಳೆಯಲು ಮತ್ತು ಈ ಮಟ್ಟಕ್ಕೆ ತಲುಪಲು ಸರ್ವ ಧರ್ಮದ ಅಭಿಮಾನಿಗಳ ಕೊಡುಗೆ ಹಾಗೂ ಪ್ರೀತಿ ಕಾರಣವಾಗಿರುತ್ತದೆ. ಹೀಗಿರುವಾಗ ನಿರ್ದಿಷ್ಟ ಒಂದು ಸಮುದಾಯವನ್ನು ಮಾತ್ರ ಉಲ್ಲೇಖಿಸಿ ‘ಅವರೇ ಮೊದಲು’ ಎಂದು ಹೇಳುವುದು ಸರಿಯಲ್ಲ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಕೆಲವರು ನಟ ಅರವಿಂದ್ ಬೋಳಾರ್ ಅವರಿಗೆ ನೇರವಾಗಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.



