ಬೆಂಗಳೂರು : ಉಡುಪಿಯ ಮಲ್ಪೆ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಭಾರಿ ಹಣಕಾಸು ಅವ್ಯವಹಾರದ ಕುರಿತು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಗಮನ ಸೆಳೆದಿದ್ದು, ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ ಸುಮಾರು 180 ಕೋಟಿ ರೂಪಾಯಿಗಳ ಭಾರಿ ಅಕ್ರಮ ಹಾಗೂ ಲೂಟಿ ನಡೆದಿದೆ ಎಂದು ವಿಧಾನಪರಿಷತ್ ನಲ್ಲಿ ಬಿಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಪೂರ್ಣ ಲೂಟಿಗೆ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರೇ ಮುಖ್ಯ ಕಾರಣ ಎಂದು ಹೇಳಿದ್ದು ಬ್ಯಾಂಕ್ ಮ್ಯಾನೇಜರ್ ಅವರ ಸಾವು ಆತ್ಮಹತ್ಯೆಯಲ್ಲ, ಅವರನ್ನು ಕೊಲೆ ಮಾಡಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಗರಣ ಹಾಗೂ ಮ್ಯಾನೇಜರ್ ಸಾವಿನ ಪ್ರಕರಣದ ಸತ್ಯಾಸತ್ಯತೆ ಹೊರಬರಲು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.



