ಧರ್ಮಸ್ಥಳ ಸೌಜನ್ಯ ಕೇಸ್​​ಗೆ ಬಿಗ್ ಟ್ವಿಸ್ಟ್ ; ಸುಪ್ರೀಂ ಕೋರ್ಟ್ ಕೋರ್ಟ್​​ನಿಂದ ಮಹತ್ವದ ಆದೇಶ

ಮಂಗಳೂರು : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ಕುರಿತು ಮರು ತನಿಖೆ ನಡೆಸುವಂತೆ ಆದೇಶ ನೀಡಿದೆ.ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ತನಿಖೆಗೆ ಸೇರಿಸದಂತೆ ಹೊಸದಾಗಿ ಪ್ರಕರಣದ ತನಿಖೆಗೆ ಸುಪ್ರೀಂ ಸೂಚನೆ ನೀಡಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಆದೇಶದ ಮೂಲಕ ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದ್ದು, ಆರೋಪಿಗಳನ್ನ ಪತ್ತೆ ಹಚ್ಚುವ ನಿರೀಕ್ಷೆ ಮತ್ತೆ ಮೂಡಿದೆ.

ಶೀಘ್ರದಲ್ಲಿ SIT ರಚನೆಯಾಗೋ ಸಾಧ್ಯತೆ ಇದೆ. ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯ, ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾದಳು. ಅಕ್ಟೋಬರ್ 10, 2012: ಧರ್ಮಸ್ಥಳದ ಮಣ್ಣಸಂಕ ಎಂಬಲ್ಲಿನ ಪೊದೆಯೊಂದರಲ್ಲಿ ಸೌಜನ್ಯಳ ಅರ್ಧನಗ್ನ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಯಿತು. ಆಕೆಯನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಅಕ್ಟೋಬರ್ 11, 2012: ಸ್ಥಳೀಯ ಪೊಲೀಸರು ಮಾನಸಿಕ ಅಸ್ವಸ್ಥ ಎನ್ನಲಾದ ಸಂತೋಷ್ ರಾವ್ ಎಂಬಾತನನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದ್ರು. ಆದರೆ, ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಆತನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸೌಜನ್ಯ ಕುಟುಂಬ ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೊದಲು ರಾಜ್ಯ ಸಿಐಡಿ (CID) ತನಿಖೆಗೆ ಒಪ್ಪಿಸಲಾಯಿತು. ನಂತರ ತನಿಖೆಯು ತೃಪ್ತಿಕರವಾಗಿಲ್ಲದ ಕಾರಣ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಿದರು. ವರ್ಷ 2014: ತನಿಖೆ ನಡೆಸಿದ ಸಿಬಿಐ, ಸಂತೋಷ್ ರಾವ್ ಮಾತ್ರವೇ ಏಕೈಕ ಆರೋಪಿ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿತು. ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದ ಇತರ ಮೂವರು ವ್ಯಕ್ತಿಗಳಿಗೆ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಜೂನ್ 16, 2023: ಬೆಂಗಳೂರಿನ 50ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ವಿಶೇಷ ಸಿಬಿಐ) ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿತು. ತನಿಖಾ ಸಂಸ್ಥೆಗಳ ವೈಫಲ್ಯ ಹಾಗೂ ಸಾಕ್ಷ್ಯ ನಾಶದ ಸಾಧ್ಯತೆಗಳ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿತು. ಜೂನ್ – ಆಗಸ್ಟ್ 2023: ಆರೋಪಿ ಖುಲಾಸೆಯಾದ ಬೆನ್ನಲ್ಲೇ ಕರಾವಳಿ ಸೇರಿದಂತೆ ಇಡೀ ರಾಜ್ಯಾದ್ಯಂತ “ಸೌಜನ್ಯಳಿಗೆ ನ್ಯಾಯ ಸಿಗಬೇಕು, ನಿಜವಾದ ಅಪರಾಧಿಗಳನ್ನು ಬಂಧಿಸಬೇಕು” ಎಂದು ಬೃಹತ್ ಪ್ರತಿಭಟನೆಗಳು ಹಾಗೂ ಆಂದೋಲನಗಳು ತೀವ್ರಗೊಂಡವು .ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ (2024)ವರ್ಷ 2024: ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹಾಗೂ ಮರುತನಿಖೆಗೆ ಆದೇಶಿಸಬೇಕೆಂದು ಕೋರಿ ಸೌಜನ್ಯಳ ತಾಯಿ ಕುಸುಮಾವತಿ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಸೆಪ್ಟೆಂಬರ್ 13, 2024: ಹೈಕೋರ್ಟ್ ಪೀಠವು, “ಘಟನೆ ನಡೆದು 12 ವರ್ಷಗಳಾಗಿವೆ. ಆರಂಭಿಕ ಹಂತದಲ್ಲೇ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಣೆಯಲ್ಲಿ ಲೋಪವಾಗಿದೆ. ಈಗ ಮರುತನಿಖೆಗೆ ಆದೇಶಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ” ಎಂದು ಅಭಿಪ್ರಾಯಪಟ್ಟು ಮರುತನಿಖೆಯ ಅರ್ಜಿಯನ್ನು ವಜಾಗೊಳಿಸಿತು. ಹೈಕೋರ್ಟ್ ಆದೇಶದ ವಿರುದ್ಧ ಸೌಜನ್ಯಳ ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (SLP) ಸಲ್ಲಿಸಿದರು. ಸುಪ್ರೀಂ ಕೋರ್ಟ್ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

Related Articles