ಸ್ಥಳೀಯ ಉದ್ಯಮಿಗಳಿಗೆ ಮಾರುಕಟ್ಟೆ ಒದಗಿಸಲು ಫುಡ್ ಆ್ಯಂಡ್ ಬಿಸಿನೆಸ್ ಎಕ್ಸ್‌ಪೋ ಸಹಕಾರಿ: ಹರಿಪ್ರಸಾದ್ ರೈ

ಉಡುಪಿ: ಗ್ರಾಮೀಣ ಪ್ರದೇಶಗಳ ಉದ್ಯಮಿಗಳು, ಸಣ್ಣ ವ್ಯಾಪಾರಸ್ಥರು, ಗೃಹೋದ್ಯಮ ನಡೆಸುವವರು ಹಾಗೂ ಆಹಾರ ಉತ್ಪನ್ನಗಳ ತಯಾರಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ, ಹೊಸ ಗ್ರಾಹಕರನ್ನು ತಲುಪಲು ಫುಡ್ ಆ್ಯಂಡ್ ಬಿಸಿನೆಸ್ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದೆ ಎಂದು ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಹೇಳಿದರು.

ವಸುದೈವ ಕುಟುಂಬಕಂ ಟ್ರಸ್ಟ್, ಉಡುಪಿ ಹಾಗೂ ಬೆನಕಾ ಇವೆಂಟ್ಸ್, ಕುಂದಾಪುರ ಇವರ ಸಹಯೋಗದಲ್ಲಿ ಉಡುಪಿ ಟೌನ್‌ಹಾಲ್‌ನಲ್ಲಿ ಆಯೋಜಿಸಲಾದ ಫುಡ್ ಆ್ಯಂಡ್ ಬಿಸಿನೆಸ್ ಎಕ್ಸ್‌ಪೋವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಉದ್ಯಮಿಗಳಿಗೆ ಮಾರುಕಟ್ಟೆ ಒದಗಿಸುವುದು, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಮನ್ನಣೆ ದೊರಕಿಸಿಕೊಡುವ ಉದ್ದೇಶದಿಂದ ಆಯೋಜಕರು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯ. ಇಂತಹ ಪ್ರದರ್ಶನಗಳು ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪರಿಚಯ ಹೆಚ್ಚಿಸಿಕೊಳ್ಳಲು ಹಾಗೂ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಲು ನೆರವಾಗಲಿವೆ ಎಂದರು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಹಾಗೂ ವಸುದೈವ ಕುಟುಂಬಕಂನ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

Related Articles