ಪುನೀತ್ ಫಲಿಮಾರ್‌ ಮತ್ತು ಸಹಚರರಿಂದ ಪೆಟ್ರೋಲ್ ಪಂಪ್‌ಗೆ ನುಗ್ಗಿ ದಾಂಧಲೆ

ಉಡುಪಿ: ನಗರದ ಗುಂಡಿಬೈಲ್‌ನ ಪೆಟ್ರೋಲ್ ಬಂಕ್‌ನಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಿಚಾರವಾಗಿ ಬಂಕ್ ಮಾಲಕರ ಸಂಬಂಧಿ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ನ.7ರಂದು ರಾತ್ರಿ ನಡೆದಿದೆ.ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಹಲ್ಲೆಗೊಳಗಾದವರು.ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಖಾಸಗಿ ಬಸ್ ಚಾಲಕ ಆಕಾಶ್ ಎಂಬಾತ ಪೆಟ್ರೋಲ್ ಬಂಕ್ ಆವರಣದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ. ಇದನ್ನು ಗಮನಿಸಿದ ಆಶಿಶ್ ಶೆಟ್ಟಿ, ಬಂಕ್ ಆವರಣದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಸಿದ್ದಾರೆ.

ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಳ್ಳಾಟವೂ ನಡೆದಿತ್ತು. ಇದಾದ ಕೆಲ ಹೊತ್ತಿನ ಬಳಿಕ ನಾಲ್ವರು ಕಾರಿನಲ್ಲಿ ಹಾಗೂ ಮತ್ತೋರ್ವ ಲಾರಿಯಲ್ಲಿ ಪೆಟ್ರೋಲ್ ಬಂಕ್‌ಗೆ ಮರಳಿದ್ದಾರೆ. ಲಾರಿಗೆ ₹3 ಸಾವಿರ ಮೌಲ್ಯದ ಡೀಸೆಲ್ ತುಂಬಿಸಿಕೊಂಡ ಬಳಿಕ ಏಕಾಏಕಿ ಆಶಿಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದ್ದಾರೆ. ಈ ವೇಳೆ ಪುನೀತ್ ಎಂಬಾತ ಕೈಯಲ್ಲಿದ್ದ ಕಡಗದಿಂದ ಆಶಿಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಹಲ್ಲೆಯಿಂದ ಗಾಯಗೊಂಡ ಆಶಿಶ್ ಶೆಟ್ಟಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಪುನೀತ್ ಫಲಿಮಾರ್‌ ಮತ್ತು ಸಹಚರರ ತಂಡವು ಕೆಲವು ತಿಂಗಳ ಹಿಂದೆ ಮಲ್ಪೆ ಬೀಚ್‌ನಲ್ಲಿ ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿದಿತ್ತು.

Related Articles