ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪತ್ನಿಯ ಎದುರೇ ಐದಾರು ಮಂದಿಯ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಯಲಹಂಕ ನ್ಯೂಟೌನ್ನ ಶೇಷಾದ್ರಿಪುರಂ ಕಾಲೇಜು ಸಮೀಪ ನಡೆದಿದೆ.ಹತ್ಯೆಯಾದವರನ್ನು 39 ವರ್ಷದ ಚರಣ್ ಗೌಡ ಎಂದು ಗುರುತಿಸಲಾಗಿದೆ.

ಇವರು ಧಣಿ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕರಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಟ್ಟಡದ ಮೇಲಿನ ಮಹಡಿಯಲ್ಲಿ ಕಚೇರಿ ಹೊಂದಿದ್ದರು. ಶುಕ್ರವಾರ ಬೆಳಗ್ಗೆ ಸುಮಾರು 10.45ರ ವೇಳೆಗೆ ಪತ್ನಿಯೊಂದಿಗೆ ಮನೆಯಿಂದ ಕಚೇರಿಗೆ ಆಗಮಿಸಿದ್ದ ಚರಣ್ ಗೌಡ ಅವರ ಮೇಲೆ ದಾಳಿ ನಡೆದಿದೆ. ಪತ್ನಿ ಕಚೇರಿಯತ್ತ ತೆರಳುವುದನ್ನೇ ಕಾಯುತ್ತಿದ್ದ ಐದಾರು ಮಂದಿ ದುಷ್ಕರ್ಮಿಗಳ ತಂಡ, ಅವರು ಬಂದ ತಕ್ಷಣ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಕೆಲವೇ ಸೆಕೆಂಡ್ಗಳಲ್ಲಿ ತಲೆಗೆ ಬಲವಾಗಿ ಹೊಡೆದು, ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಕಣ್ಣೆದುರೇ ಪತಿ ಹತ್ಯೆಯಾಗಿದ್ದರಿಂದ ಪತ್ನಿ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಆಕ್ರಂದನಗೈದಿದ್ದಾರೆ. ‘ಕಾರು ತೆಗೆಯಿರಿ, ಹೋಗೋಣ’ ಎಂದು ಪತಿಯನ್ನು ಕರೆದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅವರು ಕಣ್ಣೀರಿಟ್ಟಿದ್ದಾರೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು 22 ವರ್ಷದ ಯುವಕರ ತಂಡ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಘಟನಾ ಸ್ಥಳಕ್ಕೆ ಯಲಹಂಕ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.



