ಟಾಲಿವುಡ್ ನಟ ರಾಮ್ ಚರಣ್ ಇತ್ತೀಚೆಗೆ ತಮ್ಮ ಮುಂಬರುವ ಸಿನಿಮಾ ʻಪೆದ್ದಿʼ ಪ್ರಚಾರದ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನ ʻಫುಟ್‌ಬಾಲ್ ಆಟಗಾರʼ ಎಂದು ಕರೆದ ಘಟನೆ ಇದೀಗ ಭಾರೀ ಸದ್ದು ಮಾಡುತ್ತಿದ್ದು, ತಪ್ಪಿಗೆ ನಟ ರಾಮ್ ಚರಣ್ ಕ್ಷಮೆ ಕೇಳಿದ್ದಾರೆ.
ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಪೆದ್ದಿʼ ಮ್ಯೂಸಿಕ್ ಲಾಂಚ್ ಕಾರ್ಯಕ್ರಮ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಜಾನ್ವಿ ಕಪೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ʻಪೆದ್ದಿʼ ಸಿನಿಮಾದಲ್ಲಿ ರಾಮ್ ಚರಣ್ ಅವರು ಕುಸ್ತಿ ಮತ್ತು ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ಪಾತ್ರವನ್ನ ನಿರ್ವಹಿಸುತ್ತಿರುವುದರಿಂದ, ವೇದಿಕೆಯ ಮೇಲೆ ಅವರಿಗೆ ಭಾರತೀಯ ಕ್ರಿಕೆಟಿಗರ ಬಗ್ಗೆ ಕೆಲವು ಪ್ರಶ್ನೆಗಳನ್ನ ಕೇಳಲಾಯ್ತು.


