ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾಗಿ ಬಸ್ ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ಕೂದಲೆಳೆಯಂತರದಲ್ಲಿ ತಪ್ಪಿದೆ.

ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು (54) ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಬಸ್‌ನ ನಿಯಂತ್ರಣ ಕಳೆದುಕೊಳ್ಳುವ ಮುನ್ನವೇ ವಾಹನವನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದರು.

ಈ ವೇಳೆ ಬಸ್ ಡಿವೈಡರ್‌ಗೆ ಡಿಕ್ಕಿಯಾಯಿತು. ಆದರೆ ಚಾಲಕನ ಸಮಯೋಚಿತ ಕ್ರಮದಿಂದ ಬಸ್ ಹೆಚ್ಚಿನ ಅಪಾಯಕ್ಕೆ ಒಳಗಾಗದೆ ನಿಂತಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಚಾಲಕನ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

