ಗೋವಾ ರೆಸಾರ್ಟ್‌ನಲ್ಲಿ ಉಡುಪಿಯ ಉದ್ಯಮಿ ನಿಗೂಢ ಸಾವು: ಚಿನ್ನಾಭರಣ ದರೋಡೆ ಶಂಕೆ, ತನಿಖೆ ತೀವ್ರ

ಉಡುಪಿ: ಉಡುಪಿ ಜಿಲ್ಲೆಯ ಉದ್ಯಮಿ ಹಾಗೂ ಮಲ್ಪೆ ಬೀಚ್‌ನಲ್ಲಿ ಪ್ರವಾಸೋದ್ಯಮ ಬೋಟ್ ಉದ್ಯಮ ನಡೆಸುತ್ತಿದ್ದ ಸಂದೀಪ್ ಅವರು ಗೋವಾದ ರೆಸಾರ್ಟ್ ಒಂದರಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಕುಟುಂಬಸ್ಥರು ಹಾಗೂ ಆಪ್ತರು ಆಗ್ರಹಿಸಿದ್ದಾರೆ.ಲಭ್ಯ ಮಾಹಿತಿಯಂತೆ, ಸಂದೀಪ್ ಅವರು ಸ್ನೇಹಿತರೊಂದಿಗೆ ಮೊದಲು ಮುಂಬೈಗೆ ಪ್ರವಾಸ ತೆರಳಿ, ಬಳಿಕ ಗೋವಾಕ್ಕೆ ತೆರಳಿದ್ದರು. ಅಲ್ಲಿ ಕ್ಯಾಸಿನೋಗೆ ಭೇಟಿ ನೀಡಿ ಮನರಂಜನೆಯಲ್ಲಿ ತೊಡಗಿದ್ದ ವೇಳೆ, ಸ್ಥಳೀಯ ಯುವತಿಯೊಬ್ಬಳು ಪರಿಚಯವಾಗಿದ್ದಾಳೆ ಎನ್ನಲಾಗಿದೆ. ತಾನು ಉಡುಪಿ ಜಿಲ್ಲೆಯ ಹಿರಿಯಡಕ ಮೂಲದವಳು ಎಂದು ತುಳು ಭಾಷೆಯಲ್ಲಿ ಮಾತನಾಡಿದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಎಂದು ಹೇಳಲಾಗಿದೆ.

ಕ್ಯಾಸಿನೋ ಮುಗಿಸಿ ಸ್ನೇಹಿತರು ರೂಮ್ ಗೆ ಹಿಂದಿರುಗಲು ಸಿದ್ಧರಾದಾಗ, ತಾನು ನಂತರ ಬರುತ್ತೇನೆ ಎಂದು ತಿಳಿಸಿದ ಸಂದೀಪ್ ಕ್ಯಾಸಿನೋದಲ್ಲಿ ಉಳಿದಿದ್ದರು. ಅವರು ಪರಿಚಯವಾದ ಯುವತಿಯೊಂದಿಗೆ ಇದ್ದರು ಎನ್ನಲಾಗಿದೆ.
ಸಂದೀಪ್ ಅವರಿಗೆ ಚಿನ್ನಾಭರಣ ಧರಿಸುವ ಅಭ್ಯಾಸವಿದ್ದು, ಪ್ರವಾಸದ ವೇಳೆ ಸುಮಾರು 15ರಿಂದ 20 ಪವನ್ ಚಿನ್ನಾಭರಣ ಧರಿಸಿದ್ದರು ಎಂದು ತಿಳಿದುಬಂದಿದೆ. ಮರುದಿನ ಮುಂಜಾನೆ ಅವರು ಸ್ನೇಹಿತರಿಗೆ ವಾಟ್ಸ್ಆಪ್ ಕರೆ ಮಾಡಿದ್ದರೂ, ಕರೆ ಸ್ವೀಕರಿಸಲಾಗಿರಲಿಲ್ಲ. ನಂತರ ಸ್ನೇಹಿತರು ಸಂಪರ್ಕಿಸಲು ಯತ್ನಿಸಿದಾಗ ಕರೆ ಕಡಿತಗೊಂಡಿತ್ತು ಎನ್ನಲಾಗಿದೆ.
ಸಂದೀಪ್ ಅವರನ್ನು ಹುಡುಕುತ್ತಿದ್ದ ವೇಳೆ, ಹಿಂದಿನ ದಿನ ಕ್ಯಾಸಿನೋದಲ್ಲಿ ಕಂಡಿದ್ದ ಅದೇ ಯುವತಿ ಕೈಯಲ್ಲಿ ಎರಡು ಬಿಯರ್ ಬಾಟಲಿ ಹಿಡಿದು ಹೋಗುತ್ತಿರುವುದು ಸ್ನೇಹಿತರ ಗಮನಕ್ಕೆ ಬಂದಿದೆ. ವಿಚಾರಿಸಿದಾಗ ಸಂದೀಪ್ ರೆಸಾರ್ಟ್ ಕೊಠಡಿಯಲ್ಲಿದ್ದು, ಮಧ್ಯಾಹ್ನದ ಬಳಿಕ ಬರುತ್ತಾರೆ ಎಂದು ಆಕೆ ತಿಳಿಸಿದ್ದಾಳೆ ಎನ್ನಲಾಗಿದೆ. ಸ್ನೇಹಿತರು ಅವರನ್ನು ಭೇಟಿಯಾಗಲು ಒತ್ತಾಯಿಸಿದರೂ, ಅವರು ನಿದ್ರೆಯಲ್ಲಿದ್ದಾರೆ ಎಂದು ಹೇಳಿ ಕಳುಹಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಘಟನೆಯ ಬಳಿಕ, ಆ ಯುವತಿ ಹೋಟೆಲ್ ರಿಸೆಪ್ಶನ್‌ನಲ್ಲಿ ಕಟ್ಟರ್ ಕೇಳಿರುವುದು ಹಾಗೂ ಆಕೆಯ ಚಲನವಲನಗಳು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿವೆ ಎನ್ನಲಾಗಿದೆ. ಬಳಿಕ ಸಂದೀಪ್ ಅವರು ರೆಸಾರ್ಟ್ ಕೊಠಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ದೇಹದಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂದೀಪ್ ಜೊತೆಗಿದ್ದ ಯುವತಿ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಆಕೆಯ ಪತ್ತೆಗೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ, ಸಂದೀಪ್ ಅವರ ಆಪ್ತರು ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದು, ಕ್ಯಾಸಿನೋದಲ್ಲಿ ಪರಿಚಯವಾದ ಯುವತಿ ಚಿನ್ನಾಭರಣ ದೋಚುವ ಉದ್ದೇಶದಿಂದ ಬಿಯರ್‌ಗೆ ನಿದ್ರೆ ಮಾತ್ರೆ ಬೆರೆಸಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಿದ್ರೆ ಮಾತ್ರೆಯ ಅತಿಯಾದ ಪ್ರಮಾಣವೇ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.
ಆದರೆ ಈ ಎಲ್ಲ ಮಾಹಿತಿಗಳು ಪ್ರಾಥಮಿಕ ಹಂತದ ಆರೋಪಗಳು ಹಾಗೂ ಶಂಕೆಗಳಾಗಿದ್ದು, ಸಾವಿನ ನಿಖರ ಕಾರಣ ಮತ್ತು ಯಾವುದೇ ಅಪರಾಧ ನಡೆದಿದೆಯೇ ಎಂಬುದು ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ಸ್ಪಷ್ಟವಾಗಬೇಕಿದೆ. ಮಳೆಗಾಲದ ಬಿಡುವಿನಲ್ಲಿ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ಉದ್ಯಮಿ ಗೋವಾದಲ್ಲಿ ನಿಗೂಢವಾಗಿ ಮೃತಪಟ್ಟಿರುವುದು ಜಿಲ್ಲೆಯಾದ್ಯಂತ ಆತಂಕ ಮತ್ತು ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಮತ್ತು ಆಪ್ತರು ಒತ್ತಾಯಿಸಿದ್ದಾರೆ.

Related Articles