ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್​​ ಅಲರ್ಟ್​; ಜುಲೈ 5ರ ವರೆಗೂ ಭಾರಿ ವರ್ಷಧಾರೆ

ಬೆಂಗಳೂರು : ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಕೆಲ ದಿನಗಳ ಕಾಲ ವರುಣಾರ್ಭಟ ಮುಂದುವರಿಯಲಿದ್ದು ಭಾರಿ ಮಳೆ ನಿರೀಕ್ಷಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಜುಲೈ 5ರ ವರೆಗೆ ಆರೆಂಜ್​​ ಅಲರ್ಟ್​​ ಘೊಷಿಸಲಾಗಿದ್ದರೆ, ಉತ್ತರ ಒಳನಾಡು ಭಾಗದ ಹಲವೆಡೆ ಜುಲೈ 7ರ ವರೆಗೆ ವರ್ಷಧಾರೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಜೊತೆಗೆ ತೀವ್ರ ಗಾಳಿಯ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಭಾರಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಸೇರಿ ಬಳ್ಳಾರಿಯ ಕೆಲವೆಡೆ ಸಾಧಾರಾಣ ಮಳೆ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿಯೂ ವರುಣನ ಆಗಮನದ ಬಗ್ಗೆ ಇಲಾಖೆ ಅಂದಾಜಿಸಿದೆ. ಉತ್ತರ ಒಳನಾಡಿನ ಹಲವೆಡೆಯೂ ಗಾಳಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಹವಾಮಾನ ಹೇಗಿರಲಿದೆ?
ನಾಳೆ ಬೆಂಗಳೂರಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ದಿನವಿಡೀ ಬಲವಾದ ಗಾಳಿ ಬೀಸಲಿದ್ದು, ಕೆಲವೆಡೆ ಗಾಳಿಯ ವೇಗವು ಗಂಟೆಗೆ 56 ಕಿ.ಮೀ.ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ನಗರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್​​ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Related Articles