ಕಾರ್ಕಳ : ರಾಷ್ಟ್ರೀಯ ಹೆದ್ದಾರಿ–169ರ ಚಿಕ್ಕಮಗಳೂರು–ಉಡುಪಿ ಗಡಿಭಾಗದ ಮಾಳ ಘಾಟ್‌ನಲ್ಲಿ ಸೋಮವಾರ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಡೀಸೆಲ್ ಸೋರಿಕೆಯಾಗಿ, ಬಳಿಕ ನಡೆದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಜಾರಿ ಅವಘಡಕ್ಕೀಡಾದವು.ಡೀಸೆಲ್‌ನಿಂದ ರಸ್ತೆ ಜಾರುವಂತಾಗಿದ್ದ ಕಾರಣ ಹಿಂದಿನಿಂದ ಬಂದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಮೇಲೆ ಮರಳು ಹಾಕಿ ಡೀಸೆಲ್ ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಿದರು.
ನಿರಂತರ ಮಳೆಯಿಂದ ಘಾಟ್ ರಸ್ತೆಗಳು ಜಾರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹಾಗೂ ವೇಗ ನಿಯಂತ್ರಿಸಿಕೊಂಡು ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



