ರಾಮ ಮಂದಿರ ಟ್ರಸ್ಟ್​ನ ಮೊದಲ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

ಅಯೋಧ್ಯೆ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮೊದಲ ಸಿಇಒ ಆಗಿ ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ಕಾಣಿಕೆ ಹುಂಡಿಯ ಹಣ ಕಳವು ಪ್ರಕರಣದ ನಂತರ ಆಡಳಿತ ವೈಫಲ್ಯಗಳನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ರಾಮ ಮಂದಿರ ಟ್ರಸ್ಟ್ ಈ ಪ್ರಮುಖ ನಿರ್ಧಾರಕ್ಕೆ ಬಂದಿದೆ.ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ ನೇತೃತ್ವದ ತ್ರಿ-ಸದಸ್ಯ ಶೋಧನಾ ಸಮಿತಿಯು ನಡೆಸಿದ 600 ಅಂಕಗಳ ಕಠಿಣ ಮೌಲ್ಯಮಾಪನ ಮತ್ತು ಸಂದರ್ಶನಗಳ ನಂತರ, ಅಂತಿಮವಾಗಿ ಪರಿಶೀಲಿಸಿದ ಮೂವರು ಅತ್ಯಂತ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರ ಹೆಸರು ಮುಂಚೂಣಿಯಲ್ಲಿತ್ತು. ಮಿಲಿಟರಿ ಹಿನ್ನೆಲೆ, ಸುದೀರ್ಘ ನಿರ್ವಹಣಾ ಅನುಭವ ಮತ್ತು ನಿಸ್ಸೀಮ ಪ್ರಾಮಾಣಿಕತೆಯನ್ನು ಪರಿಗಣಿಸಿ ಜಿತೇಂದ್ರ ಮಿಶ್ರಾ ಅವರ ಹೆಸರನ್ನು ಟ್ರಸ್ಟ್ ಅಂತಿಮಗೊಳಿಸಿದೆ ಎನ್ನಲಾಗಿದೆ.

ಕೋಟ್ಯಂತರ ರೂ. ವೆಚ್ಚದ ಯೋಜನೆಗಳು, ದೇಣಿಗೆ ನಿರ್ವಹಣೆ ಮತ್ತು ಭದ್ರತಾ ಚೌಕಟ್ಟನ್ನು ಬಲಪಡಿಸುವುದು ನೂತನ ಸಿಇಒ ಜಿತೇಂದ್ರ ಮಿಶ್ರಾ ಅವರ ಪ್ರಮುಖ ಜವಾಬ್ದಾರಿಯಾಗಲಿದೆ. ಇದುವರೆಗೂ ಟ್ರಸ್ಟ್ ಪದಾಧಿಕಾರಿಗಳೇ ಆಡಳಿತಾತ್ಮಕ ಮತ್ತು ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ರಾಮ ಮಂದಿರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆಯ ನಂತರ, ಇನ್ಮುಂದೆ ರಾಮಮಂದಿರದ ಸಮಗ್ರ ನಿರ್ವಹಣೆ ಮತ್ತು ದಿನನಿತ್ಯದ ಆಡಳಿತಾತ್ಮಕ ಉಸ್ತುವಾರಿಯನ್ನು ಟ್ರಸ್ಟಿಗಳ ಬದಲಿಗೆ ಸಿಇಒ ನೇತೃತ್ವದ ತಂಡವೇ ನೋಡಿಕೊಳ್ಳಲಿದೆ. ಇದಕ್ಕೂ ಮುನ್ನ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಆಡಳಿತಾತ್ಮಕ ಪುನರ್ ರಚನೆಯ ಭಾಗವಾಗಿ ಮೂವರು ಹೊಸ ಟ್ರಸ್ಟಿಗಳನ್ನು ನೇಮಿಸಲಾಯಿತು. ದೆಹಲಿ ಮೂಲದ ಮಹೇಶ್ ಭಗಚಂದ್ಕಾ, ಅಯೋಧ್ಯೆಯ ಮದನ್ ಮೋಹನ್ ಪಾಂಡೆ ಮತ್ತು ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಹೊಸ ಟ್ರಸ್ಟಿಗಳಾಗಿದ್ದಾರೆ.

ಕಾಣಿಕೆ ಹಣ ಎಣಿಕೆಗೆ ಸಂಬಂಧಿಸಿದಂತೆ 8 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಕಳವು ಪ್ರಕರಣ ಭಾರಿ ರಾಜಕೀಯ ಚರ್ಚೆಗೆ ಕಾರಣವಾದ ನಂತರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ನೀಡಬೇಕಾಯಿತು. ಬ್ಯಾಂಕಿನ ಸಡಿಲವಾದ ಭದ್ರತಾ ಕ್ರಮಗಳೇ ಈ ಕಳ್ಳತನಕ್ಕೆ ಕಾರಣ ಎಂದು ಚಂಪತ್ ರಾಯ್ ಎಸ್​ಐಟಿಗೆ ತಿಳಿಸಿದ್ದರು.ಸರ್ವೋತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿರುವ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ಅತ್ಯುನ್ನತ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರು ವೆಸ್ಟರ್ನ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ 38 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಲವು ಪ್ರಮುಖ ಕಮಾಂಡಿಂಗ್ ಹಾಗೂ ಸಿಬ್ಬಂದಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈ ನೂತನ ನೇಮಕಾತಿಗೆ ಮೊದಲು ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಡೆಪ್ಯುಟಿ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Related Articles