ಉಡುಪಿ: ಕನ್ಯಾಮರಿಯಮ್ಮನ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 8ರಂದು ಆಚರಿಸಲಾಗುವ ಮೊಂತಿ ಹಬ್ಬವು ಕುಟುಂಬದ ಏಕತೆ, ನಂಬಿಕೆ, ಹೆಣ್ಣುಮಗುವಿನ ಘನತೆ, ಪ್ರಕೃತಿಯತ್ತ ಕೃತಜ್ಞತೆ ಹಾಗೂ ಸೃಷ್ಟಿಯ ಸಂರಕ್ಷಣೆಯ ಸಂದೇಶ ಸಾರುವ ವಿಶಿಷ್ಟ ಹಬ್ಬವಾಗಿದೆ ಎಂದು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ತಿಳಿಸಿದ್ದಾರೆ.

ಮರಿಯಮ್ಮನ ಜೀವನವು ನಂಬಿಕೆ, ವಿನಯ, ಪಾವಿತ್ರ್ಯ, ವಿಧೇಯತೆ ಮತ್ತು ದೇವರ ಚಿತ್ತಕ್ಕೆ ಸಂಪೂರ್ಣ ಸಮರ್ಪಣೆಯ ಮಾದರಿಯಾಗಿದೆ. ಪ್ರತಿಯೊಂದು ಮಗುವೂ ದೇವರ ಅಮೂಲ್ಯ ಕೊಡುಗೆಯಾಗಿದ್ದು, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪ್ರೀತಿ, ಸುರಕ್ಷತೆ, ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವ ದೊರಕಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಮೊಂತಿ ಹಬ್ಬವು ಮೂಲತಃ ಕುಟುಂಬದ ಹಬ್ಬವಾಗಿದ್ದು, ಸದಸ್ಯರು ಒಟ್ಟಾಗಿ ಪ್ರಾರ್ಥಿಸುವುದು, ಹಿರಿಯರ ಆಶೀರ್ವಾದ ಪಡೆಯುವುದು ಹಾಗೂ ಪ್ರೀತಿ ಮತ್ತು ಸಂತೋಷ ಹಂಚಿಕೊಳ್ಳುವ ಸಂಪ್ರದಾಯವು ಕುಟುಂಬದ ಮಹತ್ವವನ್ನು ಸಾರುತ್ತದೆ ಎಂದರು. ಹೊಸ ಬೆಳೆಯನ್ನು ದೇವರಿಗೆ ಅರ್ಪಿಸಿ ಹಂಚಿಕೊಳ್ಳುವ ಪರಂಪರೆಯು ಕೃತಜ್ಞತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ನೀರಿನ ಉಳಿತಾಯ, ಮರ ಬೆಳೆಸುವಿಕೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಮೊಂತಿ ಹಬ್ಬವು ಪ್ರತಿಯೊಂದು ಮನೆಗೂ ಆಶೆಯ ಬೆಳಕು, ಕುಟುಂಬಗಳಿಗೆ ಪ್ರೀತಿ ಮತ್ತು ಏಕತೆಯ ಸಂದೇಶ ಹಾಗೂ ಸೃಷ್ಟಿಯ ಸಂರಕ್ಷಣೆಗೆ ಹೊಸ ಸಂಕಲ್ಪ ತರಲಿ ಎಂದು ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಶುಭ ಹಾರೈಸಿದ್ದಾರೆ.



