ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಮಾಜಿ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು, ಆ ಬೆನ್ನಲ್ಲೇ ಭಾವುಕ ಸಂದೇಶವೊಂದನ್ನು ಎಕ್ಸ್​​ ಪೋಸ್ಟ್​​ ಮೂಲಕ ಅವರು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ. ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ ಎಂದವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಎಕ್ಸ್​​ ಪೋಸ್ಟ್​​ನಲ್ಲಿ ಏನಿದೆ?

ರಾಜಕೀಯ ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಒದಗಿಬಂದ ಅವಕಾಶದ ಭಾಗ್ಯ ಎಂದು ನಾನು ತಿಳಿದುಕೊಂಡವನು. ಮುಖ್ಯಮಂತ್ರಿಯ ಪದತ್ಯಾಗ ಮಾಡಿದ ದಿನದಿಂದ ಹೋದಲ್ಲಿ, ಬಂದಲ್ಲಿ ಜನತೆ ವ್ಯಕ್ತಪಡಿಸುತ್ತಿರುವ ಪ್ರೀತಿ, ಅಭಿಮಾನ, ವಿಶ್ವಾಸವನ್ನು ನೋಡಿದರೆ ಅಧಿಕಾರವನ್ನು ಬಳಸಿಕೊಂಡು ಜಗಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ್ದೇನೆ ಎಂಬ ಸಾರ್ಥಕ್ಯದ ಭಾವನೆ ಮೂಡಿದೆ. ಪದತ್ಯಾಗದ ನಂತರ ಇಂದು ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದಾಗ ಇದೇ ಅನುಭವವಾಯಿತು. ಸೇರಿದ್ದ ಜನಸಾಗರ, ಅವರು ತೋರಿದ ಪ್ರೀತಿ-ಅಭಿಮಾನ ಕಂಡು ಮೂಕವಿಸ್ಮಿತನಾಗಿದ್ದೇನೆ. ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ. ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಪ್ರೀತಿಸುವ ದೊಡ್ಡ ಜನಸಮೂಹವನ್ನೇ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ ನನ್ನದು. ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ. ನಾಡಿನ ಉದ್ದಗಲಕ್ಕೂ ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿ – ಅಕ್ಕರೆ ತೋರುತ್ತಿರುವ ಪ್ರೀತಿಯ ಬಂಧುಗಳ ಸೇವೆಗೆ ತಾನು ಸದಾ ಬದ್ಧ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ತಮಗೆ ಕೋರಿದ್ದ ಅದ್ದೂರಿ ಸ್ವಾಗತದ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

Related Articles